HKE Society's High School, Rudrawadi

An institute of
H. K. E. Society, Kalaburagi

☰ MENU

About School

ಹೈದ್ರಾಬಾದ ಕರ್ನಾಟಕ ಹಿಂದುಳಿದ ಭಾಗದ ಅಭಿವೃದ್ಧಿಯ ಕನಸ್ಸನ್ನು ಹೊತ್ತ ಸಂಸ್ಥೆಯ ಸಂಸ್ಥಾಪಕರಾದ ದಿ. ಶ್ರೀ. ಮಹಾದೇವಪ್ಪಾ ರಾಂಪುರೆಯವರ ಮನದಾಸೆಯನ್ನು ನೆರವೇರಿಸಲು, ಮಹಾರಾಷ್ಟ್ರದ ಗಡಿಭಾಗದ ಆಳಂದ ತಾಲ್ಲೂಕಿನ ರುದ್ರವಾಡಿ ಗ್ರಾಮ ಒಂದು ಶೈಕ್ಷಣಿಕ ಕೇಂದ್ರವನ್ನಾಗಿ ಮಾಡಲಾಯಿತು. ಈ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಬಂಗರಗಾ, ಜಮಗಾ (ಆರ್), ಕೋತನ ಹಿಪ್ಪರಗಾ, ಬಬಲೇಶ್ವರ ಗ್ರಾಮಗಳೂ ಸೇರಿದಂತೆ ಪ್ರೌಢಶಿಕ್ಷಣದಿಂದ ವಂಚಿತವಾಗಿದ್ದವು. ಸ್ವತಂತ್ರ ಸಿಕ್ಕು 60 ವರ್ಷಗಳು ಗತಿಸಿದರೂ ಬರೀ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದ ಈ ಗ್ರಾಮಗಳ ಮಕ್ಕಳಿಗಾಗಿ ಶಿಕ್ಷಣ ಪ್ರೇಮಿಗಳು, ಗ್ರಾಮೀಣ ಮಕ್ಕಳ ಅಭಿವೃದ್ಧಿಯ ಹರಿಕಾರರು, ಸಂಸ್ಥೆಯ ಅಧ್ಯಕ್ಷರೂ ಆದ ಸನ್ಮಾನ್ಯ ಶ್ರೀ. ಬಸವರಾಜ ಭೀಮಳ್ಳಿಯವರ ಘನ ಅಧ್ಯಕ್ಷಾಧಿಕಾರಾವಧಿಯಲ್ಲಿ ರುದ್ರವಾಡಿ ಗ್ರಾಮದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಪ್ರೌಢಶಾಲೆ 1996-97 ನೇ ಸಾಲಿನಲ್ಲಿ 8ನೇ ತರಗತಿಯಿಂದ ಆರಂಭವಾಯಿತು.

ಸುಮಾರು 61 ವಿದ್ಯಾರ್ಥಿಗಳಿಂದ ಆರಂಭವಾದ ಈ ಪ್ರೌಢಶಾಲೆ ಇಲ್ಲಿಯವರೆಗೆ ಸುಮಾರು 1000 ಕ್ಕಿಂತಲು ಹೆಚ್ಚು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡಿರುತ್ತಾರೆ. ಇಂತಹ ಶೈಕ್ಷಣಿಕ ಕಾರ್ಯನಿರ್ವಹಿಸುತ್ತಿರುವ ಈ ಪ್ರೌಢಶಾಲೆಗಾಗಿ ಸಂಸ್ಥೆಯ ವತಿಯಿಂದ 3-00 ಎಕರೆ ಜಮೀನು ಖರೀದಿಸಿ ಕಟ್ಟಡ ನಿರ್ಮಾಣದ ಅಡಿಗಲ್ಲು ಸಮಾರಂಭವನ್ನು ದಿನಾಂಕ 24-03-2002 ರಂದು ಹಮ್ಮಿಕೊಳ್ಳಲಾಗಿತ್ತು. ಆಗಿನ ಬೀದರ ಕ್ಷೇತ್ರದ ಲೋಕಸಭಾ ಸದಸ್ಯರಾದ ದಿ. ಶ್ರೀ. ರಾಮಚಂದ್ರ ವೀರಪ್ಪನವರು ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ. ರೇವು ನಾಯಕ ಬೆಳಮಗಿ ಹಾಗೂ ಶ್ರೀ ಸುಭಾಷ ಆರ್. ಗುತ್ತೇದಾರ ಭಾಗವಹಿಸಿರುವ ಈ ಸಮಾರಂಭದ ಘನ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಾ|| ಬಿ. ಜಿ. ಜವಳಿಯವರು ವಹಿಸಿದ್ದರು.

ಗ್ರಾಮೀಣ ಭಾಗದ ಮಕ್ಕಳ ಬಾಳಿಗೆ ಬೆಳಕಾಗಿ ಬಂದ ಈ ಪ್ರೌಢಶಾಲೆ 8, 9 ಹಾಗೂ 10ನೇ ತರಗತಿಗಳು ನಡೆಯುತ್ತಿದ್ದು, ಸುಮಾರು 7 ಜನ ಶಿಕ್ಷಕರು, 2 ಜನ ಶಿಕ್ಷಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ವರ್ಷ ಒಟ್ಟು 224 ವಿದ್ಯಾರ್ಥಿಗಳು ಪ್ರವೇಶ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಅನುಭವಿ, ನುರಿತ, ತರಬೇತಿ ಪಡೆದ ಶಿಕ್ಷಕರಿದ್ದು ಎಲ್ಲಾ ತರಹದ ಪಾಠೋಪಕರಣಗಳು ಹಾಗೂ ಪೀಠೋಪಕರಣಗಳ ಸೌಲಭ್ಯವಿದ್ದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಶಾಲೆಯ ಶಿಕ್ಷಕ ವೃಂದದವರು ಶ್ರಮಿಸುತ್ತಿದ್ದಾರೆ.

ಶಾಲೆ ಪ್ರಾರಂಭವಾದಾಗಿನಿಂದ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಸಿದ್ರಾಮಪ್ಪಾ ಎ. ರೇವಪ್ಪಗೋಳ ರವರು ಶಾಲೆಗಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಹಗಲಿರುಳು ಶ್ರಮವಹಿಸಿ ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಶಿಕ್ಷಕ ಹಾಗೂ ಸಿಬ್ಬಂದಿಯವರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ಈ ಶಾಲೆ ತಾಲ್ಲೂಕಿನಲ್ಲಿಯೇ ಒಂದು ಮಾದರಿ, ಹೆಸರುವಾಸಿ ಶಾಲೆಯಾಗಿ ಮುಂದುವರೆಸುತ್ತಿದ್ದಾರೆ.

 

ಶಾಲೆಯ ಶೈಕ್ಷಣಿಕ ಸಾಧನೆ

ಈ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರತಿವರ್ಷದ ಶೈಕ್ಷಣಿಕ ಸಾಲಿನಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. 1998-99 ನೇ ಸಾಲಿನ 10ನೇ ತರಗತಿಯ ಪ್ರಥಮ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಯ ಫಲಿತಾಂಶ ಪ್ರತಿಷತ 90.16% ರಷ್ಟಾಗಿ ಶಾಲೆಯ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಹಾಗೆಯೇ 1999-2000ನೇ ಸಾಲಿನ 10ನೇ ಪರೀಕ್ಷೆಯಲ್ಲಿ ಶೇಕಡಾ 76.27% ಫಲಿತಾಂಶ ಬಂದರೆ, 2000-2001ನೇ ಸಾಲಿನಲ್ಲಿ ಶೇಕಡಾ 67.25% ಸಾಧಿಸಿದ್ದು, 2001-2002 ರಲ್ಲಿ ಪ್ರತಿಷತ 75.38% ಬಂದಿದ್ದಲ್ಲದೇ ಈಗ ಇಂಜಿನಿಯರ ಆಗಿ ಕಾರ್ಯನಿರ್ವಹಿಸುತ್ತಿರುವ ಶಶಿಕಾಂತ ತಂ. ಧರ್ಮರಾಯ ಎಂಬ ವಿದ್ಯಾರ್ಥಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 85.08% ಅಂಕಗಳನ್ನು ಗಳಿಸುವುದರೊಂದಿಗೆ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿರುವನು.

2002-2003 ನೇ ಸಾಲಿನ 10ನೇ ಪರೀಕ್ಷೆಯ ಫಲಿತಾಂಶ ಶೇಕಡಾ 80.21% ರಷ್ಟು ಬಂದರೆ, 2003-2004ನೇ ಸಾಲಿನಲ್ಲಿ ಪರೀಕ್ಷೆಯ ಫಲಿತಾಂಶ 91.8% ರಷ್ಟು ಬಂದಿದ್ದಕ್ಕಾಗಿ ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅಭಿನಂದನಾ ಪತ್ರ ಬಂದಿದ್ದು ಹೆಮ್ಮೆಯ ವಿಷಯವಾಗಿದೆ. ಹಾಗೆಯೇ 2004-2005ನೇ ಸಾಲಿನ 10ನೇ ಫಲಿತಾಂಶ 91.86% ರಷ್ಟು ಬಂದಿದ್ದಕ್ಕಾಗಿ ಸತತ 2ನೇ ಬಾರಿ ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರಿಂದ ಅಭಿನಂದನಾ ಪತ್ರ ಬಂದಿದ್ದು ನಿಜವಾಗಿಯೂ ಗ್ರಾಮೀಣ ಮಕ್ಕಳ ಅಪ್ರತಿಮ ಪ್ರತಿಭೆಯನ್ನು ಹೊರ ತಂದಿರುವದು ಸಂತೋಷದ ಸಂಗತಿಯಾಗಿದೆ.